ಕತ್ತಲೆ ಮುಸುಕು :  (ಬ್ಲ್ಯಾಕ್ಔಟ್) ಯುದ್ಧ ದಿವಸಗಳಂದು ರಾತ್ರಿ ವೇಳೆ ಸ್ವಂತನೆಲೆ ಶತ್ರುವಿಗೆ ಕಾಣದಂತೆ ಮಾಡಲು ವಿಧಿಸುವ ಆಜ್ಞೆ. ಮುಖ್ಯ ಉದ್ದೇಶ ರಕ್ಷಣೆ. ಆಕಾಶದಲ್ಲಿ ಸುತ್ತುತ್ತಿರುವ, ನೆಲದ ಮೇಲೆ ಗಸ್ತುತಿರುಗುತ್ತಿರುವ, ಸಮುದ್ರದಲ್ಲಿ ಹೊಂಚುತ್ತಿರುವ ಶತ್ರುವಿನ ವಿರುದ್ಧ ಕತ್ತಲೆಮುಸುಕು ಅಪಾರ ಸ್ವರಕ್ಷಣೆ ಒದಗಿಸುತ್ತದೆ. ಎಲ್ಲೋ ಕಾಣಬರುವ ಒಂದೇ ಒಂದು ಬೆಳಕಿನ ಕಿರಣವೂ ಎದುರಾಳಿಯ ಇರುವಿಕೆಯ ಬಗ್ಗೆ ಅಪಾರ ಮಾಹಿತಿ ಕೊಡಬಲ್ಲುದು. ಆದ್ದರಿಂದ ಇನಿತೂ ತಿಳಿಯದಂತೆ ಎಚ್ಚರವಹಿಸ ಬೇಕಾದದ್ದು ಬಲು ಆವಶ್ಯಕ. ಕತ್ತಲೆ ಮುಸುಕು ಆಜ್ಞೆ ಜಾರಿಯಲ್ಲಿರುವಾಗ ಪಾಲಿಸುವ ಕೆಲವು ನಿಯಮಗಳು ಹೀಗಿವೆ; ಸೈನ್ಯಬಲಗಳ ಚಲನೆಯ ಕಾಲದಲ್ಲಿ (ಅನಿವಾರ್ಯವೆನ್ನಿಸಿದಾಗ ಮಾತ್ರ) ಮರೆಮಾಡಿರುವ ಮಿಣುಕು ದೀಪಗಳನ್ನು ಉಪಯೋಗಿಸಬೇಕು; ನಾಗರಿಕ ವಲಯಗಳಲ್ಲಿ ಬೀದಿಗಳ ಸಾಲುದೀಪಗಳು, ಶೃಂಗಾರದೀಪಗಳು ಯಾವುವೂ ಇರುವುದಿಲ್ಲ; ಮನೆಗಳ ಪಾರದರ್ಶಕ ವಸ್ತುಗಳನ್ನೆಲ್ಲ ಕಪ್ಪುಗವಸಿನಿಂದ ಮುಚ್ಚಿರಬೇಕು; ವಾಹನಗಳ ಮಾರ್ಗದರ್ಶಿ ದೀಪಗಳ ಮೇಲುಭಾಗವನ್ನು ಕಪ್ಪುಬಣ್ಣದಿಂದ ಮೆತ್ತಿರುವುದಲ್ಲದೇ ಅವುಗಳ ಬೆಳಕು ಬಲು ಮಂದವಾಗಿರಬೇಕು; ತೀವ್ರ ಪರಿಸ್ಥಿತಿಗಳಲ್ಲಿ ಇಂಥ ಚಲನೆಯನ್ನು ನಿಷೇಧಿಸಬಹುದು.
ಶತ್ರುವಿಗೆ ಉಪಯುಕ್ತವಾಗುವ ಯಾವುದೇ ಸಮಾಚಾರದ ಪ್ರಕಟಣೆಯನ್ನು ತಡೆಹಿಡಿಯುವುದು-ಎಂಬ ವ್ಯಾಪಕಾರ್ಥದಲ್ಲೂ ಬ್ಲ್ಯಾಕ್ಔಟ್ ಎಂಬ ಪದವನ್ನು ಬಳಸಲಾಗುತ್ತದೆ ಎಂದಿದೆ.                                       (ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ